ಜೂಲ್, ಜೇಮ್ಸ್ ಪ್ರೆಸ್‍ಕಾಟ್
1818-1889, ಇಂಗ್ಲಿಷ್ ಭೌತ ವಿಜ್ಞಾನಿ, ಮ್ಯಾಂಚೆಸ್ಟರ್ ನಗರದ ಸಮೀಪದಲ್ಲಿರುವ ಸಾಲ್ಸಫರ್ಡನಲ್ಲಿ 1818 ರ ಡಿಸೆಂಬರ್ ತಿಂಗಳ 24ರಲ್ಲಿ ಜನನ. ಈತ ತನ್ನ 15ನೆಯ ವಯಸ್ಸಿನವರೆಗೂ ಮನೆಯಲ್ಲೆ ವ್ಯಾಸಂಗ ಮಾಡಿ, ಬಳಿಕ ಸ್ವಲ್ಪ ಕಾಲ ಡಾಲ್ಟನ್ ಜೊತೆಯಲ್ಲಿ ಗಣಿತ ಮತ್ತು ಭೌತವಿಜ್ಞಾನಗಳನ್ನು ಅಭ್ಯಾಸ ಮಾಡಿದ. ಬಲುಮಟ್ಟಿಗೆ ಸ್ವಪ್ರಯತ್ನದಿಂದಲೇ ಮುಂದೆ ಬಂದ ವಿಜ್ಞಾನಿ ಜೂಲ್ ಎನ್ನಬಹುದು. ಈತನ ತಂದೆ ಮದ್ಯ ತಯಾರಕನಾಗಿದ್ದ. ಇವನ ಮರಣಾ ನಂತರ ಜೂಲ್ ಸ್ವಲ್ಪ ಕಾಲ ಅದೇ ಕೆಲಸವನ್ನು ಮುಂದುವರಿಸಿ 1854 ರಲ್ಲಿ ಆ ಕಾರ್ಖಾನೆಯನ್ನು ಮಾರಿ ಮುಂದಕ್ಕೆ ತನ್ನ ಆಸಕ್ತಿ ಕೇಂದ್ರವಾದ ವಿಜ್ಞಾನ ಸಂಶೋದನೆಗಳಲ್ಲಿ ಪೂರ್ಣವಾಗಿ ಮಗ್ನನಾದ. ಆ ಮೊದಲೇ ತನ್ನ 19 ನೆಯ ವಯಸ್ಸಿನಲ್ಲಿ ಜೂಲ್ ವಿದ್ಯುಚ್ಚಾಲಕವೊಂದನ್ನು ರಚಿಸಿ ಅದರ ವಿವರಗಳೆನೆಲ್ಲಾ ಪ್ರಕಟಿಸಿದ್ದ. ಈತ ತನ್ನ ಸಂಶೋಧನೆಗಳಲ್ಲಿ ಬಹುಮಟ್ಟಿಗೆ ತಾನೇ ರಚಿಸಿದ ಉಪಕರಣಗಳನ್ನು ಬಳಸುತ್ತಿದ್ದ. ತನ್ನ ಪ್ರತಿಯೊಂದು ಸಂಶೋದನೆಯಲ್ಲಿಯೂ ಭೌತಪರಿಣಾಮಗಳನ್ನು ಬಲು ನಿಖಿರವಾಗಿ ಅಳೆಯುತ್ತ, ಪ್ರಯೋಗಗಳಿಂದ ನಿರ್ದಿಷ್ಟ ಹಾಗೂ ಕರಾರುವಾಕ್ಕಾದ ಅಂಕೆ ಅಂಶಗಳನ್ನು ಪಡೆಯುವತ್ತ ವಿಶೇಷ ಲಕ್ಷ್ಯ ಹರಿಸುತ್ತಿದ್ದ.
ಜೂಲನ ಮುಖ್ಯ ಸಂಶೋಧನೆಗಳ ಪೈಕಿ ಉಷ್ಣದ ಸ್ವರೂಪಕ್ಕೆ ಸಂಬಂಧಿಸಿದ್ದು ಒಂದಿದೆ. ತನ್ನ 25 ವರ್ಷಗಳ ಸತತ ಪ್ರಯೋಗಗಳಿಂದ ಜೂಲ್ , ಹಿಂದೆ ಡೇರಿ ಮೇಯರ್ ಮುಂತಾದವರು ತಿಳಿಸಿದ್ದಂತೆ ಉಷ್ಣವು ದ್ರವ್ಯದ ಒಂದು ರೂಪವಲ್ಲ ಎಂಬುದನ್ನು ಸ್ಥಿರೀಕರಿಸಿದ; ಜೊತೆಗೆ, ಉಷ್ಣವು ಶಕ್ತಿಯ ಒಂದು ರೂಪ ಎಂದು ನಿಸ್ಸಂದೇಹವಾಗಿ ಸ್ಥಾಪಿಸಿದ ಕೂಡ. ಪ್ರಯೋಗಗಳಿಂದ ಉಷ್ಣ ಮತ್ತು ಯಾಂತ್ರಿಕ ಶಕ್ತಿ ಪರಸ್ಪರ ಪರಿವರ್ತನೀಯ ಎಂದು ಖಚಿತವಾಗಿ ತೋರಿಸಿ, ಅವುಗಳ ಪರಮಾಣುಗಳಿಗಿರುವ ಸಂಬಂದವನ್ನು ನಾಲ್ಕಾರು ಬೇರೆ ಬೇರೆ ವಿಧಾನಗಳಿಂದ ನಿಖರವಾಗಿ ನಿರ್ಧರಿಸಿದ. ಉಷ್ಣದ ಯಾಂತ್ರಿಕ ಶಕ್ತಿಸಾಮ್ಯ ಎಗೆ ಅವನು ಪಡೆದ ಬೆಲೆ 4.184ಘಿ107 eಡಿgs/ಛಿಚಿಟ ಆಗಿತ್ತು. ಪ್ರಯೋಗಗಳನ್ನು ಮುಂದುವರಿಸಿ ಉಷ್ಣ, ಯಾಂತ್ರಿಕ ಶಕ್ತಿ ಮತ್ತು ರಾಸಾಯನಿಕ ಶಕ್ತಿ ಇವುಗಳ ಪರಸ್ಪರ ಪರಿವರ್ತನ ಕ್ರಿಯೆಗಳನ್ನು ಆಳವಾಗಿ ಸಂಶೋಧಿಸಿ, ಶಕ್ತಿ ಪರಿವರ್ತನ ಕ್ರಿಯೆಗೆ ಸಂಬಂಧಿಸಿದ ಬಹುಮುಖ್ಯ ನಿಯಮವಾದ ಉಷ್ಣಗತಿವಿಜ್ಞಾನದ ಮೊದಲ ನಿಯಮದ ನಿರೂಪಣೆಗೆ ಜೂಲ್ ದಾರಿಮಾಡಿಕೊಟ್ಟ.

	ಅನಿಲ ದ್ರವೀಕರಣದಲ್ಲಿ ಬಹೂಪಯುಕ್ತವಾಗಿ ಕಂಡುಬಂದಿರುವ ಪ್ರಕ್ರಿಯೆಯೆಂದರೆ ಜೂಲ್-ಥಾಮ್ಸನ್ ಪರಿಣಾಮ. ಪ್ರಯೋಗವೊಂದನ್ನು ಯಶಸ್ವಿಯಾಗಿ ನಿರ್ವಹಿಸಿ ಈ ಪರಿಣಾಮವನ್ನು ಆವಿಷ್ಕರಿಸಿದ ಕೀರ್ತಿ ಜೂಲ್ ಮತ್ತು ವಿಲಿಯಮ್ ಥಾಮ್ಸನ್ (ಲಾರ್ಡ್ ಕೆಲ್ವಿನ್) ಇಬ್ಬರಿಗೂ ಸಲ್ಲುತ್ತದೆ. ಆ ಮೊದಲು ಜೂಲ್ ಅನಿಲಗಳ ವಿಕಾಸದಿಂದ ಅವುಗಳ ಉಷ್ಣತೆಯಲ್ಲಿ ಯಾವ ರೀತಿಯಲ್ಲಿ ವ್ಯತ್ಯಾಸವಾಗಬಹುದು ಎಂಬುದನ್ನು ತಿಳಿಯುವ ಸಲುವಾಗಿ ಒಂದು ಪ್ರಯೋಗವನ್ನು ನಡೆಸಿದ್ದ. ಒಂದು ಜಾಡಿನೊಳಗೆ ತುಂಬಿದ್ದ ಅನಿಲ ನಿರ್ವಾತಗೊಳಿಸಿದ್ದ ಮತ್ತೊಂದು ಜಾಡಿಯನ್ನು ಪ್ರವೇಶಿಸಿ ವ್ಯಾಕೋಚಿಸುವಂತೆ ಮಾಡಿದಾಗ ಅನಿಲದ ಉಷ್ಣತೆಯಲ್ಲಿ ಯಾವ ವ್ಯತ್ಯಾಸವೂ ಕಂಡುಬರಲಿಲ್ಲ. ಆದರೂ ಥಾಮ್ಸನ್ನನ ಸಲೆಹೆಯ ಪ್ರಕಾರ ಜೂಲ್ ಇದೇ ಪ್ರಯೋಗವನ್ನು ಬೇರೊಂದು ರೀತಿಯಲ್ಲಿ ಮಾಡಿದಾಗ ಫಲಿತಾಂಶ ಬೇರೆ ರೀತಿಯಲ್ಲಿ ಇತ್ತು. ಪ್ರಯೋಗದಲ್ಲಿ ಹೆಚ್ಚು ಒತ್ತಡದಲ್ಲಿರುವ ಅನಿಲವೊಂದು ಅದರ ಮಾರ್ಗದಲ್ಲಿರುವ ಸರಂದ್ರ ಬೆಣೆಯ ಮೂಲಕ ಹಾದು ವ್ಯಾಕೋಚಿಸುವಂತೆ ಮಾಡಿದಾಗ, ಅದರ ಉಷ್ಣತೆ ಗಮನಾರ್ಹ ಮಟ್ಟದಲ್ಲಿ ಕಡಿಮೆಯಾದದ್ದನ್ನು ಜೂಲ್ ಗಮನಿಸಿದ. ಜೂಲ್ ಮತ್ತು ಥಾಮ್ಸನ್ ಜ್ಞಾಪಕಾರ್ಥವಾಗಿ ಜೂಲ್-ಥಾಮ್ಸನ್ ಪರಿಣಾಮ ಎಂದು ಕರೆದಿರುವ ಈ ಪ್ರಕ್ರಿಯೆ ಅನ್ವಯ ದೃಷ್ಠಿಯಿಂದ ಮಾತ್ರವಲ್ಲದೆ ಸೈದ್ದಾಂತಿಕ ದೃಷ್ಠಿಯಿಂದಲೂ ಬಹಳ ಮಹತ್ವವುಳ್ಳದ್ದು.

	ವಾಹಕವೊಂದರಲ್ಲಿ ವಿದ್ಯುತ್ ಪ್ರವಹಿಸಿದಾಗ ಅದರಲ್ಲಿ ಉಷ್ಣೋತ್ಪತ್ತಿಯಾಗುವುದನ್ನು ಡೇವಿ ಎಂಬಾತ ಗಮನಿಸಿದ್ದ; ಆದರೆ ಇದರ ಬಗ್ಗೆ ಅವನು ಸಂಶೋಧನೆಯನ್ನು ಮುಂದುವರೆಸಲಿಲ್ಲ. ಇದು ತಿಳಿವಿಗೆ ಬಂದಂದಿನಿಂದ ಇದರಲ್ಲಿ ಆಸಕ್ತನಾದ ಜೂಲ್ ಇದರ ಬಗ್ಗೆ ಅನೇಕ ಪ್ರಯೋಗಗಳನ್ನು ನಡೆಸಿ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿದನಲ್ಲದೆ ಪ್ರಯೋಗದತ್ತ ವಿವರಗಳ ಆಧಾರದ ಮೇಲೆ ಒಂದು ಮುಖ್ಯ ತೀರ್ಮಾನವನ್ನೂ ಪಡೆದ; ವಿದ್ಯುತ್ಪ್ರವಹನದಿಂದ ಪ್ರತಿ ಸೆಕೆಂಡಿನಲ್ಲೂ ಉತ್ಪತ್ತಿಯಾಗುವ ಉಷ್ಣದ ಪ್ರಮಾಣ ವಿದ್ಯುತ್‍ಪ್ರವಾಹದ ವರ್ಗಕ್ಕೂ ವಾಹಕದ ರೋಧಕತೆಗೂ ಸರಳಾನುಪಾತದಲ್ಲಿದೆ. ಅಂದರೆ, ಕಿseಛಿ ( ಟಶಿ ಖ . ಇದನ್ನು ಆತನ ಜ್ಞಾಪಕಾರ್ಥವಾಗಿ ಜೂಲ್ ನಿಯಮ ಎಂದೇ ಕರೆಯಲಾಗಿದೆ.

	1851ರಲ್ಲಿ ಜೂಲ್ ಒಂದು ಹೊಸ ಪ್ರರೂಪದ ಉಷ್ಣ ಯಂತ್ರವನ್ನು ರಚಿಸಿದ. ವಾಯುವನ್ನು ಒಂದು ಕ್ರಿಯಾಪದಾರ್ಥವನ್ನಾಗಿ ಉಪಯೋಗಿಸಿ ಯಂತ್ರವನ್ನು ಹೊಸ ಚಕ್ರೀಯ ಕ್ರಿಯೆಯೊಂದಕ್ಕೆ ಒಳಪಡಿಸಿ ಕಾರ್ಯಗತಗೊಳಿಸಿದ. ಇತ್ತೀಚಿನ ಅನಿಲ ತಿರುಬಾನಿ ಯಂತ್ರಗಳಲ್ಲಿ ಈ ಚಕ್ರೀಯ ವಿಧಾನವನ್ನು (ಇದನ್ನು ಜೂಲ್ ಚಕ್ರೀಯ ಕ್ರಿಯೆ ಎನ್ನತ್ತಾರೆ) ಬಲುಮಟ್ಟಿಗೆ ಬಳಸಿಕೊಂಡಿದ್ದಾರೆ.

	ಮೇಲಿನ ಮುಖ್ಯ ಸಂಶೋಧನೆಗಳೇ ಅಲ್ಲದೆ ಅನಿಲವನ್ನು ಸಂಮರ್ದಿಸಿದಾಗ ಜರುಗುವ ಕಾರ್ಯ ಒಂದು ಸರಳನ್ನು ಲಾಂಬಿಕವಾಗಿ ಹಿಗ್ಗಿಸಿ ಇಲ್ಲವೆ ಕುಗ್ಗಿಸಿದಾಗ ಅದರ ಉಷ್ಣತೆ ಯಾವ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ-ಇವೇ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಜೂಲನು ಪ್ರಯೋಗಗಳನ್ನು ಕೈಗೊಂಡು ಕೆಲವು ಮುಖ್ಯ ವಿವರಗಳನ್ನು ಪಡೆದ. ಈತ ಪ್ರಯೋಗ ನಡೆಸಿ ಕಬ್ಬಿಣದ (ಅಥವಾ ಯಾವುದೇ ಕಾಂತೀಯ ಪದಾರ್ಥದ) ಸರಳೊಂದನ್ನು ಅದರ ಉದ್ದದ ನೇರದಲ್ಲಿ ಕ್ರಮೇಣ ಹೆಚ್ಚುತ್ತಿರುವ ಕಾಂತಕ್ಷೇತ್ರದ ಪ್ರಭಾವಕ್ಕೆ ಒಳಪಡಿಸಿದಾಗ ಅದರ ಉದ್ದ ಹೆಚ್ಚುವುದು ಎಂಬ ಕೌತುಕಕಾರಿ ಸಂಗತಿಯನ್ನು ಪ್ರಕಟಿಸಿದ. ಜೂಲನು ಮತ್ತೊಂದು ಸಾಧನೆಯೆಂದರೆ ಅನಿಲ ಸ್ಥಿತಿಯಲ್ಲಿರುವ ಪದಾರ್ಥದ ಅಣುಗಳ ಸರಾಸರಿ ವೇಗವನ್ನು ಮೊತ್ತಮೊದಲಿಗೆ ಸಿದ್ಧಾಂತದ ಆಧಾರದ ಮೇಲೆ ಲೆಕ್ಕಾಚಾರ ಮಾಡಿ ನಿರ್ಧರಿಸಿದುದು.

	ತನ್ನ ಸಂಶೋಧನೆಗಳಿಂದ ಭೌತವಿಜ್ಞಾನ ಕ್ಷೇತ್ರವನ್ನು ವಿವಿಧ ರೀತಿಯಲ್ಲಿ ವಿಸ್ತರಿಸಿ ಶ್ರೀಮಂತಗೊಳಿಸಿದ ಜೂಲ್‍ನಿಗೆ ಅನೇಕ ರೀತಿಯ ಗೌರವ ಮನ್ನಣೆಗಳು ದೊರಕಿದವು; ಇಂಗ್ಲೆಂಡಿನ ಶ್ರೇಷ್ಠ ವಿಜ್ಞಾನ ಸಂಸ್ಥೆಯಾದ ರಾಯಲ್ ಸೊಸೈಟಿಯ ಕೋಪ್ಲಿ ಪದಕ. ವಿಜ್ಞಾನದ ಮುನ್ನೆಡೆಗಾಗಿಯೇ ಶ್ರಮಿಸುತ್ತಿರುವ ಬ್ರಿಟಿಷ್ ಅಸೋಸಿಯೇಷನ್ನಿನ ಅಧ್ಯಕ್ಷ ಪದವಿ (1872 ಮತ್ತು 1877, ಎರಡು ಬಾರಿ) ಇವುಗಳಲ್ಲಿ ಮುಖ್ಯವಾದವು.

	1889 ರ ಅಕ್ಟೋಬರ್ 11 ರಂದು ಮರಣ.
(ಕೆ.ಎಸ್.ಆರ್.ಐ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ